ತಂಪಾದ, ಶಾಂತವಾದ ಒಂದು ಕೊಳದಲ್ಲಿ ಮೂರು ಮೀನು ಗೆಳೆಯರು ವಾಸವಾಗಿದ್ದವು. ಮುಂದಾಲೋಚಕ ಯಾವಾಗಲೂ ನಾಳೆಯ ಬಗ್ಗೆ ಯೋಚಿಸುತ್ತಿತ್ತು. ಚುರುಕುಬುದ್ಧಿಯ ಬಳಿ ಯಾವಾಗಲೂ ಒಂದು ಜಾಣ ಉಪಾಯ ಇರುತ್ತಿತ್ತು. ನೋಡೋಣಪ್ಪನಿಗೆ ಸುಮ್ಮನೆ ತೇಲಾಡುತ್ತಾ, ಏನೂ ಮಾಡದೆ ಇರುವುದೆಂದರೆ ತುಂಬಾ ಇಷ್ಟ.
ಒಂದು ಸಂಜೆ ಇಬ್ಬರು ಬೆಸ್ತರು ತಮ್ಮ ದೊಡ್ಡ ಬಲೆಗಳನ್ನು ಹಿಡಿದು ಕೊಳದ ಪಕ್ಕದಲ್ಲಿ ನಡೆದು ಹೋದರು. “ಇಲ್ಲಿ ಎಷ್ಟೊಂದು ಮೀನುಗಳಿವೆ ನೋಡು!” ಎಂದ ಒಬ್ಬ. “ನಾಳೆ ಬೆಳಿಗ್ಗೆ ಬೇಗ ಬಂದು ಇವನ್ನೆಲ್ಲಾ ಹಿಡಿಯೋಣ.”
ಮುಂದಾಲೋಚಕ ಅದನ್ನು ಕೇಳಿಸಿಕೊಂಡು ಗೆಳೆಯರ ಬಳಿ ಈಜಿಕೊಂಡು ಬಂತು. “ಕೇಳಿಸಿತಾ? ಇವತ್ತು ರಾತ್ರಿಯೇ ಇಲ್ಲಿಂದ ಹೊರಡೋಣ! ಇಲ್ಲೊಂದು ಪುಟ್ಟ ತೊರೆ ಇದೆ, ಅದು ದೂರದ ಒಂದು ಸರೋವರಕ್ಕೆ ಹೋಗುತ್ತದೆ.”
“ನಾನು ಇಲ್ಲೇ ಇರುತ್ತೇನೆ,” ಎಂದಿತು ಚುರುಕುಬುದ್ಧಿ. “ತೊಂದರೆ ಬಂದರೆ ಏನಾದರೂ ಉಪಾಯ ಮಾಡುತ್ತೇನೆ.” ನೋಡೋಣಪ್ಪ ಆಕಳಿಸಿತು. “ಇದು ನಮ್ಮ ಮನೆ. ಅವರು ಬರದೆಯೂ ಇರಬಹುದು. ಕಾದು ನೋಡೋಣಪ್ಪ.”
ಹಾಗಾಗಿ ಮುಂದಾಲೋಚಕ ಒಂಟಿಯಾಗಿ ಪುಟ್ಟ ತೊರೆಯಲ್ಲಿ ಈಜುತ್ತಾ ಹೊರಟಿತು. ಬೆಳದಿಂಗಳಲ್ಲಿ ಅದು ನೈದಿಲೆ ಎಲೆಗಳು ಮತ್ತು ಮೆತ್ತನೆಯ ಹಸಿರು ಪಾಚಿ ಇರುವ ಒಂದು ದೊಡ್ಡ, ಸುರಕ್ಷಿತ ಸರೋವರವನ್ನು ತಲುಪಿತು. ಅದು ತನ್ನ ಈಜುರೆಕ್ಕೆಗಳನ್ನು ಬೀಸಿ ಹಳೆಯ ಕೊಳಕ್ಕೆ ಟಾಟಾ ಮಾಡಿತು.
ಮರುದಿನ ಬೆಳಿಗ್ಗೆ ಬೇಗನೆ — ಚಪಕ್! ಬೆಸ್ತರು ಕೊಳಕ್ಕೆ ಬಲೆ ಬೀಸಿದರು. ಚುರುಕುಬುದ್ಧಿ ಬಲೆಯೊಳಗೆ ಅಲ್ಲಾಡದೆ, ನಿದ್ದೆ ಮಾಡುತ್ತಿರುವಂತೆ ತೇಲುತ್ತಾ ಬಿದ್ದುಕೊಂಡಿತು. “ಇದೊಂದು ನಿದ್ದೆಬುರುಕ ಮೀನು,” ಎಂದು ಒಬ್ಬ ಬೆಸ್ತ ಅದನ್ನು ಮತ್ತೆ ನೀರಿಗೆ ಎಸೆದ.
ನೋಡೋಣಪ್ಪ ಕೂಡ ಬಲೆಗೆ ಸಿಕ್ಕಿಬಿತ್ತು. ಅದು ಪಟಪಟನೆ ಒದ್ದಾಡಿತು. ಬಲೆಯನ್ನು ಮೇಲಕ್ಕೆ ಎತ್ತುತ್ತಿದ್ದಂತೆಯೇ ಅದಕ್ಕೆ ಒಂದು ಪುಟ್ಟ ತೂತು ಕಾಣಿಸಿತು. ಜೋರಾಗಿ ನುಲಿದಾಡಿ — ಡುಬುಕ್! — ಮತ್ತೆ ನೀರಿಗೆ ಬಿತ್ತು.
ಅವತ್ತು ರಾತ್ರಿ ನೋಡೋಣಪ್ಪ ಮತ್ತು ಚುರುಕುಬುದ್ಧಿ ತೊರೆಯಲ್ಲಿ ಈಜುತ್ತಾ ಸರೋವರಕ್ಕೆ ಹೋದವು. ಮುಂದಾಲೋಚಕ ಅಲ್ಲಿ ಅವಕ್ಕಾಗಿ ಕಾಯುತ್ತಿತ್ತು. “ಮುಂದಿನ ಸಲ,” ಎಂದು ಏದುಸಿರು ಬಿಡುತ್ತಾ ನೋಡೋಣಪ್ಪ ಹೇಳಿತು, “ನಾನೂ ಮೊದಲೇ ಮುಂದಾಲೋಚನೆ ಮಾಡುತ್ತೇನೆ!”
ನೀತಿತೊಂದರೆ ಬರುತ್ತಿದೆ ಎಂದು ಗೊತ್ತಾದಾಗ, ಮೊದಲೇ ತಯಾರಾಗಿರು.
ಇದರ ಬಗ್ಗೆ ಮಾತಾಡೋಣ: ಯಾವ ಮೀನು ಎಲ್ಲಕ್ಕಿಂತ ಬುದ್ಧಿವಂತ ಎಂದು ನಿನಗೆ ಅನಿಸುತ್ತದೆ? ಶಾಲೆಗೆ ಅಥವಾ ಪ್ರವಾಸಕ್ಕೆ ಹೊರಡಲು ನೀನು ಹೇಗೆ ತಯಾರಾಗುತ್ತೀಯ?



